ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪ್ರಖ್ಯಾತ ಚಿತ್ರನಟಿ ಹಾಗೂ ಕನ್ನಡ ಹೋರಾಟಗಾರ್ತಿ ಅಶ್ವಿನಿ ಗೌಡ ಮಾತನಾಡಿ ಮನುಷ್ಯ ತಾನು ಎಲ್ಲೇ ಹೋದರೂ ತನ್ನ ಹುಟ್ಟಿದ ನೆಲ, ಆಡುವ ನುಡಿ ಮತ್ತು ಹೆಮ್ಮೆಯ ಸಂಸ್ಕೃತಿಯನ್ನು ಹೃದಯದಲ್ಲಿ ಹೊತ್ತು ಸಾಗಬೇಕು. ಆಗ ಮಾತ್ರ ವ್ಯಕ್ತಿತ್ವಕ್ಕೆ ನಿಜವಾದ ಗೌರವ ಸಿಗುತ್ತದೆ ಎಂದರು.
​ಬೆಂಗಳೂರಿನಲ್ಲಿ ಇಂಗ್ಲಿಷ್, ಹಿಂದಿ ಪ್ರಭಾವದಿಂದ ಕನ್ನಡದ ಪರಿಸ್ಥಿತಿ ಗಡಗಡ ನಡುಗುವಂತಾಗಿದ್ದರೆ, ಇಲ್ಲಿನ ಕುಂದಾಪ್ರ ಕನ್ನಡದ ಶೈಲಿ, ಜನರ ಆತಿಥ್ಯ ಮತ್ತು ಪರಿಸರ ಅನನ್ಯವಾದದ್ದು ಎಂದು ಕೊಂಡಾಡಿದರು.
​ಜೀವನದಲ್ಲಿ ವಯಸ್ಸು ಕೇವಲ ಒಂದು ಸಂಖ್ಯೆ ಅಷ್ಟೆ. ನಾವು ಎಲ್ಲವನ್ನು ಸಾಧಿಸುವ ಛಲ ನಮ್ಮಲ್ಲಿರಬೇಕು. ಮೊಬೈಲ್ ಅನ್ನು ಜ್ಞಾನಕ್ಕಾಗಿ ಬಳಸಿ, ಅದಕ್ಕೆ ದಾಸರಾಗಬೇಡಿ. ಸಮಾಜದಲ್ಲಿ ಕೆಟ್ಟ ಸಹವಾಸದಿಂದ ದೂರವಿದ್ದು, ಒಳ್ಳೆಯ ಸ್ನೇಹಿತರನ್ನು ಆರಿಸಿಕೊಳ್ಳಿ. ಸಮಾಜಸೇವೆಗೆ ಯಾವುದೇ ದೊಡ್ಡ ಪದವಿ ಬೇಕಾಗಿಲ್ಲ, ಮನುಷ್ಯತ್ವ ಒಂದಿದ್ದರೆ ಸಾಕು ಎಂದು ತಮ್ಮ ಜೀವನದಲ್ಲಿ ತಾವು ನಡೆಸಿದ ವೃದ್ಧೆಯೊಬ್ಬರ ರಕ್ಷಣೆಯ ನೈಜ ಘಟನೆಯನ್ನು ಹಂಚಿಕೊಳ್ಳುತ್ತಾ ಭಾವುಕರಾಗಿ ನುಡಿದರು. ಲಕ್ಷಾಂತರ ರೂಪಾಯಿ ಫೀಸ್ ಪಡೆಯುವ ಸಂಸ್ಥೆಗಳ ನಡುವೆ, ಗಳಿಕೆಯ ಒಂದು ಭಾಗವನ್ನು ಸಮಾಜ ಸೇವೆಗೆ ಮುಡಿಪಾಗಿಟ್ಟ ಸುಜ್ಞಾನ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು.

Leave a Reply

Your email address will not be published. Required fields are marked *