ಕುಂದಾಪುರ : ಕುಂದಾಪ್ರ ಕನ್ನಡ ಭಾಷೆಯನ್ನು ಮುಂದಿನ ಪೀಳಿಗೆಗೆ ತಿಳಿಸದೆ ಹೋದರೆ ಒಂದಲ್ಲ ಒಂದು ದಿನ ಕುಂದಾಪ್ರ ಕನ್ನಡ, ಸಂಸ್ಕೃತಿ, ಕಲೆ ಎಲ್ಲವೂ ನೆನಪು ಹೋಗುವ ಸಾಧ್ಯತೆ ಇದೆ ಎಂದು ಮಂಗಳೂರು ವಿಶ್ವ ವಿದ್ಯಾನಿಲಯದ ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಸದಸ್ಯ, ಮಾಜಿ ಸಚಿವ ಕೆ.ಜಯಪ್ರಕಾಶ ಹೆಗ್ಡೆ ಹೇಳಿದರು.

ಮಂಗಳೂರು ವಿಶ್ವ ವಿದ್ಯಾನಿಲಯ ಕುಂದಾಪ್ರ ಕನ್ನಡ ಅಧ್ಯಯನ ಪೀಠ ಮತ್ತು ಯಡಾಡಿ ಮತ್ಯಾಡಿಯ ಸುಜ್ಞಾನ ಪದವಿ ಪೂರ್ವ ಕಾಲೇಜಿನ ಜಂಟಿ ಆಶ್ರಯಲ್ಲಿ ಕುಂದಾಪ್ರ ಕನ್ನಡ ಭಾಷಿಕ ಪ್ರದೇಶದ ವಿದ್ಯಾರ್ಥಿಗಳಿಗೆ ವಿದ್ಯಾರಣ್ಯ ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಹಾಗೂ ಚಿತ್ರಕಲಾ ಸ್ಪರ್ಧೆ ‘ವಾಲ್ಬೆಲ್ಲ’ ಯನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

ಭಾಷೆ ಎಂಬುದು ಮೆದುಳಿನ ದೀಪ. ಕುಂದಾಪ್ರ ಕನ್ನಡ ಮನಸ್ಸಿನಲ್ಲಿ, ಹೃದಯದಲ್ಲಿ ಇದ್ದರೆ ಕುಂದಾಪ್ರ ಕನ್ನಡ ಶಾಶ್ವತವಾಗಿ ಉಳಿಯುತ್ತದೆ. ಕುಂದಾಪ್ರ ಕನ್ನಡವನ್ನು ಉಳಿಸಿ ಬೆಳೆಸಲು ಕೊನೆ ಪಕ್ಷ ತಂದೆ ತಾಯಂದಿರು ಮನೆಯಲ್ಲಿ ಮಕ್ಕಳೊಡನೆ ಕುಂದಾಪ್ರ ಕನ್ನಡ ಭಾಷೆಯಲ್ಲಿ ಮಾತನಾಡಬೇಕು. ಕುಂದಾಪ್ರ ಕನ್ನಡದಲ್ಲಿ ಮಾತನಾಡುವ ಅಭ್ಯಾಸ ಮಾಡಿಕೊಳ್ಳದಿದ್ದರೆ ಕುಂದಾಪ್ರ ಕನ್ನಡ ನೆನಪು ಹೋಗುವ ಪರಿಸ್ಥಿತಿ ನಿರ್ಮಾಣವಾಗಲಿದೆ
ಉಡುಪಿ ಜಿಲ್ಲೆಯ ಅರ್ಧದಷ್ಟು ಹೆಚ್ಚು ಜನರು ಕುಂದಾಪ್ರ ಕನ್ನಡ ಮಾತನಾಡುವವರಿದ್ದಾರೆ. ಕುಂದಾಪ್ರ ಕನ್ನಡದ ಬಗ್ಗೆ ಅಧ್ಯಯನ ನಡೆಸಲು ಸರಕಾರ ಕುಂದಾಪ್ರ ಕನ್ನಡ ಅಧ್ಯಯನ ಪೀಠ ಸ್ಥಾಪನೆ ಮಾಡಲು ಅನುಮತಿ ನೀಡಿ 1.5 ಕೋಟಿ ರೂ. ಬಿಡುಗಡೆ ಮಾಡಿದೆ. ಈ ಭಾಷೆ ಬಗ್ಗೆ ಅಧ್ಯಯನ ನಡೆಸಿ ಪುಸ್ತಕ ಬಿಡುಗಡೆ ಮಾಡಿದರೆ ಇನ್ನೂ ಹೆಚ್ಚಿನ ಅನುಕೂಲ ಆಗಲಿದೆ. ಕುಂದಾಪ್ರ ಕನ್ನಡದಲ್ಲಿ ಪಿಎಚ್‍ಡಿ ಮಾಡುವವರಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಬರಹಗಾರರಿಗೂ ಸಹಾಯ ಮಾಡಲಾಗುವುದು. ಕುಂದಾಪ್ರ ಕನ್ನಡ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರಯತ್ನ, ಕೆಲಸ ಮಾಡುವವರಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಅವರು ಹೇಳಿದರು.

ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕದ ಗೌರವಾಧ್ಯಕ್ಷೆ, ಚಲನಚಿತ್ರ ನಟಿ ಅಶ್ವಿನಿ ಗೌಡ ಮಾತನಾಡಿ, ನಮ್ಮಲ್ಲಿ ಛಲ, ಹಠ ಇದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು. ದುಶ್ಚಟಗಳಿಗೆ ದಾಸರಾಗದೆ ಉತ್ತಮ ವಿದ್ಯಾಭ್ಯಾಸ ಪಡೆದು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬೆಳೆಯಬೇಕು. ಕಷ್ಟದಲ್ಲಿರುವವರಿಗೆ ಸ್ಪಂದಿಸುವ ಗುಣವನ್ನು ಬೆಳೆಸಿಕೊಳ್ಳಬೇಕು. ಸಮಾಜ ಸೇವೆ ಮಾಡಲು ಮಾನವೀಯತೆ ಹಾಗೂ ಮನುಷ್ಯತ್ವ ಬೇಕಾಗಿದ್ದು, ಮಾನವೀಯತೆಗೆ ಯಾವುದೇ ಜಾತಿ, ಮತ, ಧರ್ಮಗಳು ಅಡ್ಡಿಯಾಗಬಾರದು. ಕುಂದಾಪ್ರ ಕನ್ನಡ ಭಾಷಾ ಶೈಲಿ ಅದ್ಭುತ, ಇಲ್ಲಿನ ಜನರ ಪ್ರೀತಿ, ಪರಿಸರದ ತುಂಬಾ ಇಷ್ಟ ಎಂದು ಅವರು ಹೇಳಿದರು.

ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಡಾ.ರಮೇಶ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿವಿಯ ನಿವೃತ್ತ ಕುಲಪತಿ ರಾಜು ಮೊಗವೀರ ಮತ್ತು ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಸಂಯೋಜಕ ಪ್ರೊ.ನಾಗಪ್ಪ ಗೌಡ ಆರ್. ಅವರನ್ನು ಸಮ್ಮಾನಿಸಲಾಯಿತು. ಗುತ್ತಿಗೆದಾರ ಅರುಣ್ ಕುಮಾರ್ ಹೆಗ್ಡೆ, ಕೊಲ್ಲೂರು ದೇವಸ್ಥಾನದ ಮಾಜಿ ಧರ್ಮದರ್ಶಿ ಸಬ್ಲಾಡಿ ಮಂಜಯ್ಯ ಶೆಟ್ಟಿ, ಜಯರತ್ನ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ದಿನೇಶ ಹೆಗ್ಡೆ ಮೊಳಹಳ್ಳಿ, ಕುಂದಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ವಿಕಾಸ ಹೆಗ್ಡೆ, ಸಮಾಜಸೇವಕ ಸಿ.ಜಗನ್ನಾಥ ಶೆಟ್ಟಿ, ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಸದಸ್ಯರಾದ ಡಾ.ರೇಖಾ ಬನ್ನಾಡಿ, ಜುಡಿತ್ ಮೆಂಡೊನ್ಸಾ, ಉದಯ ಶೆಟ್ಟಿ ಪಡುಕೆರೆ, ರಾಜೇಶ ಕೆ.ಸಿ. ಉಪಸ್ಥಿತರಿದ್ದರು.
ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಕೋಶಾಧಿಕಾರಿ ಭರತ್ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಜತ್ ಭಟ್ ಮತ್ತು ಪ್ರೀತಿ ಸನ್ಮಾನ ಪತ್ರ ವಾಚಿಸಿದರು. ಪ್ರಕಾಶ ಆಚಾರ್ಯ ನಿರೂಪಿಸಿದರು.

Leave a Reply

Your email address will not be published. Required fields are marked *