ಕುಂದಾಪುರ: ನಮ್ಮ ಹೆಮ್ಮೆಯ ಹಳ್ಳಿ ಭಾಷೆಯಾದ ಕುಂದಾಪ್ರ ಕನ್ನಡ ಕೇವಲ ಮಾತನಾಡುವ ಮಾಧ್ಯಮವಲ್ಲ, ಅದು ನಮ್ಮ ಸಂಸ್ಕೃತಿ, ಬದುಕು ಮತ್ತು ಪರಂಪರೆಯ ಪ್ರತಿಬಿಂಬ. ಇಂದಿನ ಆಧುನಿಕ ಯುಗದಲ್ಲಿ ಇಂಗ್ಲಿಷ್, ಶುದ್ಧ ಕನ್ನಡ ಕಲಿಯುವುದರ ಜೊತೆಗೆ, ನಮ್ಮ ಮಣ್ಣಿನ ಭಾಷೆಯಾದ ಕುಂದಾಪ್ರ ಕನ್ನಡವನ್ನು ಮನೆಯಲ್ಲಿ ಸದಾ ಬಳಸುವ ಮೂಲಕ ಅದನ್ನು ಜೀವಂತವಾಗಿರಿಸಬೇಕು ಎಂದು ಮಾಜಿ ಸಚಿವರು ಹಾಗೂ ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಪೋಷಕರಾದ ಕೆ. ಜಯಪ್ರಕಾಶ್ ಹೆಗ್ಡೆ ಅವರು ಮಾರ್ಮಿಕವಾಗಿ ನುಡಿದರು.

​ಅವರು ಯಡಾಡಿ ಮತ್ಯಾಡಿಯ ಸುಜ್ಞಾನ ಪದವಿಪೂರ್ವ ಕಾಲೇಜು, ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಜಂಟಿ ಆಶ್ರಯದಲ್ಲಿ ವಿದ್ಯಾರಣ್ಯ ಶಾಲಾ ಆವರಣದಲ್ಲಿ ಜುಲೈ 06ರಂದು ಸೋಮವಾರ ಕುಂದಾಪ್ರ ಕನ್ನಡ ಭಾಷಿಕ ಪ್ರದೇಶದ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಹಾಗೂ ಚಿತ್ರಕಲಾ ಸ್ಪರ್ಧೆ ‘ವಾಲ್ಬೆಲ್ಲ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ತಮ್ಮ ಭಾಷಣದಲ್ಲಿ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ, ಇಂದಿನ ತಲೆಮಾರಿನ ಮಕ್ಕಳಿಗೆ ಹಳ್ಳಿಯ ಸೊಗಡನ್ನು ಪರಿಚಯಿಸುವ ಅಗತ್ಯವನ್ನು ಒತ್ತಿ ಹೇಳಿದರು. ಇವತ್ತಿನ ಮಕ್ಕಳು ಮೊಬೈಲ್, ಡಿಜಿಟಲ್ ಲೋಕದಲ್ಲಿ ಮುಳುಗುವ ಬದಲು ಹಳ್ಳಿಯ ಮನೆಗಳಿಗೆ ಹೋಗಿ ಅಜ್ಜಿ-ತಾತನ ಹತ್ತಿರ ಕೂತು ಮಾತಾಡಬೇಕು. ಆಗ ಅವರು ಹಳೆಯ ಕಾಲದ ಅಪರೂಪದ ಕಥೆಗಳನ್ನು, ಭತ್ತದ ನಾಟಿ, ಕೊಯ್ಲು, ಕೃಷಿ ಪದ್ಧತಿ ಮತ್ತು ಗದ್ದೆ ಹೂಡುವ ಕಲೆಗಳ ಬಗ್ಗೆ ವಿವರಿಸುತ್ತಾರೆ. ಆ ಹಳೆಯ ನೆನಪುಗಳು ಮುಂದಿನ ಪೀಳಿಗೆಗೆ ಸಿಗದೇ ಹೋದರೆ ನಮ್ಮ ಅಸ್ತಿತ್ವಕ್ಕೇ ಧಕ್ಕೆಯಾಗುತ್ತದೆ ಎಂದರು.

ಇವತ್ತಿನ ಈ ಕಾರ್ಯಕ್ರಮಕ್ಕೆ ಸುಜ್ಞಾನ ಶಿಕ್ಷಣ ಸಂಸ್ಥೆಯವರೇ ಸಂಪೂರ್ಣ ವೆಚ್ಚವನ್ನು ಭರಿಸಿದ್ದು, ಸರ್ಕಾರದ ಹಣವನ್ನು ಆಶ್ರಯಿಸದೇ ಸ್ವಂತ ಆಸಕ್ತಿಯಿಂದ ಭಾಷಾ ಪ್ರೇಮ ಮೆರೆದಿದ್ದಾರೆ ಎಂದು ಶ್ಲಾಘಿಸಿದರು. ಅಲ್ಲದೆ
​ಕುಂದಾಪ್ರ ಕನ್ನಡದ ಕುರಿತು ಪಿಎಚ್.ಡಿ (PhD) ಮಾಡಲು ಮುಂದೆ ಬರುವ ಆಸಕ್ತ ಸಂಶೋಧಕರಿಗೆ ಹಾಗೂ ಪುಸ್ತಕ ಬರೆಯುವ ಬಡ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪೀಠದ ವತಿಯಿಂದ ಎಲ್ಲ ರೀತಿಯ ಆರ್ಥಿಕ ಹಾಗೂ ಪ್ರಾಯೋಗಿಕ ಸಹಕಾರ ನೀಡಲಾಗುವುದು ಎಂದು ಪ್ರಕಟಿಸಿದರು.

Leave a Reply

Your email address will not be published. Required fields are marked *